ಕಾಲಾಂಕ

 ನರ, ಸ್ನಾಯುಗಳ ತೆರನ ಒಂದು ಅಂಗಾಂಶವನ್ನು ಚುರುಕೇಳಿಸಲು ಒಂದು ವಿದ್ಯುತ್ತು ಚೋದನೆಗೆಗೆ ಹಿಡಿಯುವ ಮಿಲಿಸೆಕೆಂಡುಗಳಲ್ಲಿ ಗುರುತಿಸುವ ಕಾಲಾವಧಿ (ಕ್ರೊನಾಕ್ಸೀ). ಚೋದನೆಗೆ ಈಡಾದಷ್ಟೂ ಒಂದು ನರ ಇಲ್ಲವೇ ಸ್ನಾಯುವಿನ ಕಾಲಾಂಕ ಮೊಟಕಾಗಿರುವುದು. ಒಂದು ಊತಕದ ಮೂಲಕ ಸಾಕಷ್ಟು ಹೊತ್ತು ಹರಿಸಿದರೆ ಅದನ್ನು ಚೋದಿಸಬಲ್ಲ ತೀರ ನಿರ್ಬಲವಾದ ವಿದ್ಯುತ್ತಿನ ಶಕ್ತಿಗೆ ವಿದ್ಯುನ್ಮೂಲಬಲ (ರಿಯೊಬೇಸ್) ಎಂದಿದೆ. ಇದಕ್ಕಿಂತಲೂ ನಿರ್ಬಲವಾದ ವಿದ್ಯುತ್ತನ್ನು ಎಷ್ಟೇ ಹೊತ್ತು ಹರಿಸಿದರೂ ಅಂಗಾಂಶವನ್ನು ಚೋದಿಸಲಾರದು. ಸಾಮಾನ್ಯವಾಗಿ ಕಾಲಾಂಕವನ್ನು ಅಳೆವಾಗ ವಿದ್ಯುತ್ ಚೋದನೆಯ ಶಕ್ತಿ ವಿದ್ಯುನ್ಮೂಲಬಲದ ಎರಡರಷ್ಟಿರುತ್ತದೆ.  ಒಂದು ಚೋದನೆ ಪರಿಣಾಮಕಾರಿಯೆಂದು ನಿರ್ಧರಿಸಲು ವಿದ್ಯುತ್ತಿನ ಶಕ್ತಿಯೊಂದಿಗೆ ಊತಕದ ಮೂಲಕ ವಿದ್ಯುತ್ತು ಸಾಗುತ್ತಿರುವ ಕಾಲಾವಧಿಯನ್ನು ಗಣಿಸಲೇಬೇಕಾಗುವುದು.  ಚೋದಿಸಲು ಬಳಸುವ ವಿದ್ಯುತ್ತಿನ ಶಕ್ತಿ ತೀವ್ರವಾಗಿದ್ದರೆ, ತುಸು ಹೊತ್ತಿನಲ್ಲೇ ಪ್ರತಿಕ್ರಿಯೆ ಹುಟ್ಟಸುತ್ತದೆ.  ಆದರೆ ಶಕ್ತಿಯನ್ನು ಇಳಿಸಿದಂತೆಲ್ಲ ಚೋದಿಸುವ ಹೊತ್ತೂ ನೀಳವಾಗುವುದು.  ಅಂಗಾಂಶಗಳ ಉದ್ರಿಕ್ತಸ್ಥಿತಿಗಳನ್ನು ಹೋಲಿಸಲು ಕಾಲಾಂಕಗಳಿಂದ ಅನುಕೂಲವಿದೆ.  ಉದಾಹರಣೆಗೆ ಎಲುಗಟ್ಟಿನ (ಸ್ಕೆಲಿಟಲ್) ಸ್ನಾಯುವಿನದಕ್ಕಿಂತಲೂ ಒಂದು ನರತಂತುವಿನ ಕಾಲಾಂಕ ಚಿಕ್ಕದಾಗಿರುತ್ತದೆ.  ನರದ ಮೂಲಕ ಸಾಗುವ ಆವೇಗದ (ಇಂಪಲ್ಸ್) ವೇಗವನ್ನು ಮೊದಲು ಅಂದಾಜು ಹಾಕಿದವ ಹೆಲ್ಮ್‍ಹೋಲ್ಟ್‍ಸ್ (1850).  ಕ್ರೊನಾಕ್ಸೀ (ಕಾಲಾಂಕ) ಹೆಸರಿಗೆ ಕಾರಣನಾದವ ಫ್ರಾನ್ಸಿನ ವಿಜ್ಞಾನಿ ಲೂಯಿ ಲಾಪಿಕ್ (1909).

(ಡಿ.ಎಸ್.ಎಸ್.)